ದೇವಾಲಯ ಪರಿಚಯ

ಶ್ರೀ ಗವಿ ಸಿದ್ದೇಶ್ವರ ಗುಹಾ ದೇವಾಲಯ, ಆಗಳಿ

ಪ್ರಕೃತಿಯ ಮಡಿಲಲ್ಲಿರುವ ಸುಂದರ ತಾಣ, ಆಧ್ಯಾತ್ಮಿಕತೆಯ ಸೆಲೆ ಮತ್ತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಪುಣ್ಯಕ್ಷೇತ್ರವೇ “ಶ್ರೀ ಗವಿ ಸಿದ್ದೇಶ್ವರ ಗುಹಾ ದೇವಾಲಯ”. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ, ಕೊಡ್ಲಿಪೇಟೆ ಹೋಬಳಿಯ ‘ಆಗಳಿ’ ಎಂಬ ಸುಂದರ ಗ್ರಾಮದ ಬೆಟ್ಟದ ಮೇಲಿರುವ ಈ ದೇವಾಲಯವು ಅತೀವ ದೈವಿಕ ಶಕ್ತಿ ಹಾಗೂ ಐತಿಹಾಸಿಕ ಮಹತ್ವವನ್ನು ಹೊಂದಿದೆ.

ಪ್ರಾಚೀನ ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆ

ಈ ಪುಣ್ಯಕ್ಷೇತ್ರವು ಸುಮಾರು 700ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ. ಹಿಂದೆ ಈ ಗ್ರಾಮವನ್ನು “ಮುಳ್ಳೂರು” ಎಂದು ಕರೆಯಲಾಗುತ್ತಿತ್ತು; ನಂತರ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇದು “ಆಗಳಿ” ಎಂದು ಮರುನಾಮಕರಣಗೊಂಡಿತು. ಸ್ಥಳ ಪುರಾಣದ ಪ್ರಕಾರ, ಪುರಾತನ ಕಾಲದಲ್ಲಿ ಶಿವಶರಣರು (ಮುನಿಗಳು) ಈ ಪ್ರದೇಶದಲ್ಲಿ ನೆಲೆಸಿ ತಪಸ್ಸು ಮತ್ತು ಪೂಜಾ ಕೈಂಕರ್ಯಗಳಲ್ಲಿ ನಿರತರಾಗಿದ್ದರು. ಅವರಲ್ಲಿ ಒಬ್ಬರಾದ ಶ್ರೀ ಸಿದ್ದೇಶ್ವರರು ಇದೇ ಸ್ಥಳದಲ್ಲಿ ಐಕ್ಯರಾದರು ಎಂಬ ಬಲವಾದ ನಂಬಿಕೆ ಇದೆ.

ಗುಹೆಯೊಳಗೆ ಸ್ವಯಂಭೂ (ಉದ್ಭವ ಲಿಂಗ) ರೂಪದಲ್ಲಿ ನೆಲೆಸಿರುವ ಗವಿ ಸಿದ್ದೇಶ್ವರ ಸ್ವಾಮಿಯು, ಇಲ್ಲಿಗೆ ಬಂದು ಪ್ರಾರ್ಥಿಸುವ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾನೆ ಎಂಬುದು ಭಕ್ತರ ಅಪಾರ ನಂಬಿಕೆ. ಜೊತೆಗೆ, ಗುಹೆಯಲ್ಲಿ ನೆಲೆಸಿರುವ ಶಿವಭಕ್ತ ಸಿದ್ದೇಶ್ವರರ ದರ್ಶನ ಪಡೆದು ಭಕ್ತರು ಪುನೀತರಾಗುತ್ತಾರೆ.

ಶ್ರೀ ಗವಿ ಸಿದ್ದೇಶ್ವರ ಗುಹಾ ದೇವಾಲಯವು ವಾರದ ಎಲ್ಲಾ ದಿನಗಳು ತೆರೆದಿದ್ದು, ಪ್ರತಿ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ದೈನಂದಿನ ಪೂಜೆ

ದೇವರ ದರ್ಶನ ಮತ್ತು ಭಕ್ತರಿಗೆ ಶಾಂತಿ ಹಾಗೂ ಆಶೀರ್ವಾದ ನೀಡುವ ಪವಿತ್ರ ಕಾರ್ಯಕ್ರಮ.

ದೀಪಾರಾಧನೆ

ಪ್ರತಿ ಸೋಮವಾರ ಮತ್ತು ಶುಕ್ರವಾರ ದೇವಾಲಯದಲ್ಲಿ ನಡೆಯುವ ಪೂಜಾ ಕಾರ್ಯ .

ಅನ್ನದಾನ

ಅನ್ನದಾನ ಜಾತ್ರೆ ಉತ್ಸವ ಮತ್ತು ವಿಶೇಷ ದಿನಗಳಲ್ಲಿ ನಡೆಯುವ ಪ್ರಸಾದ ವಿತರಣಾ ಕಾರ್ಯಕ್ರಮ .

ಉತ್ಸವ ಸೇವೆ

ಹಬ್ಬದ ದಿನಗಳಲ್ಲಿ ನಡೆಯುವ ವಿಶೇಷ ಪೂಜೆ, ಜಾತ್ರೆ ಮತ್ತು ಧಾರ್ಮಿಕ ಆಚರಣೆಗಳು.

ಐತಿಹಾಸಿಕ ಮಹತ್ವ

ಈ ಪುಣ್ಯಕ್ಷೇತ್ರವು ಪೌರಾಣಿಕ ಹಿನ್ನೆಲೆಯೊಂದಿಗೆ ಭವ್ಯವಾದ ಐತಿಹಾಸಿಕ ಪ್ರಸಿದ್ಧಿಯನ್ನು ಹೊಂದಿದೆ. ಹಿಂದೆ ಕೊಡಗನ್ನು ಆಳುತ್ತಿದ್ದ ಪ್ರಸಿದ್ಧ ದೊರೆ ವೀರರಾಜನು ತನ್ನ ಸೈನ್ಯದೊಂದಿಗೆ ಈ ಪ್ರಾಂತ್ಯಕ್ಕೆ ಬಂದಿದ್ದಾಗ, ಈ ಪವಿತ್ರ ಸ್ಥಳದಲ್ಲಿ ತಂಗಿದ್ದನೆಂದು ಇತಿಹಾಸ ಹೇಳುತ್ತದೆ. ಆ ಸಂದರ್ಭದಲ್ಲಿ ರಾಜನಿಗೆ ಸಾಕ್ಷಾತ್ ಶಿವನೇ ಕನಸಿನಲ್ಲಿ ಕಾಣಿಸಿಕೊಂಡು, ಈ ಭಾಗದ ಜನರ ಹಿತದೃಷ್ಟಿಯಿಂದ ಹಾಗೂ ಕ್ಷೇತ್ರದ ಪಾವಿತ್ರ್ಯತೆಗಾಗಿ ಒಂದು ಕೆರೆಯನ್ನು ನಿರ್ಮಿಸುವಂತೆ ದೈವವಾಣಿಯ ಮೂಲಕ ಸೂಚಿಸಿದನೆಂಬ ಬಲವಾದ ಪ್ರತೀತಿಯಿದೆ.

ದೈವಿಕ ಆಜ್ಞೆಯಂತೆ ರಾಜನು ಭಕ್ತಿಯಿಂದ ಇಲ್ಲಿ ಒಂದು ವಿಶಾಲವಾದ ಕೆರೆಯನ್ನು ನಿರ್ಮಿಸಿದನು. ಇದೇ ಇಂದು ಪ್ರಸಿದ್ಧವಾಗಿರುವ ಐತಿಹಾಸಿಕ ‘ದಳವಾಯಿ ಕೆರೆ’. ಈ ಕೆರೆಯು ಇಂದಿಗೂ ಸುಸ್ಥಿತಿಯಲ್ಲಿದ್ದು, ದೇವಾಲಯದ ದೈವಿಕ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕೇವಲ ಧಾರ್ಮಿಕ ನಂಬಿಕೆಯಷ್ಟೇ ಅಲ್ಲದೆ, ರಾಜಮನೆತನದ ನಂಟು ಮತ್ತು ದೈವ ಸಂಕಲ್ಪ ಕುರುಹಾಗಿ ಈ ಕೆರೆಯು ಇಂದಿಗೂ ಭಕ್ತರನ್ನು ಹಾಗೂ ಇತಿಹಾಸ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಿದೆ.

ಅವರ ಆಳ್ವಿಕೆ ಸಾಕ್ಷಿಯಾಗಿ ‘ವಿ’ ಎಂದು ಬರೆಯಲ್ಪಟ್ಟ ಗುರುತಿನ ಕಲ್ಲುಗಳು ಈ ಭಾಗದಲ್ಲಿ ಸ್ಥಾಪಿಸಲ್ಪಟ್ಟಿವೆ.

ವಿಶೇಷ ಆಚರಣೆಗಳು ಮತ್ತು ಶಿವರಾತ್ರಿ ಜಾತ್ರಾ ಮಹೋತ್ಸವ

ಪ್ರತಿ ವರ್ಷ ಮಹಾಶಿವರಾತ್ರಿಯಂದು ಆಗಲಿ ಗ್ರಾಮದ ಶ್ರೀ ಗವಿ ಸಿದ್ದೇಶ್ವರ ಗುಹಾ ದೇವಾಲಯವು ದೈವಿಕ ಸಂಭ್ರಮದ ಕಡಲಾಗಿ ಮಾರ್ಪಡುತ್ತದೆ. ಸಾವಿರಾರು ಭಕ್ತರು ಶ್ರದ್ಧೆಯಿಂದ ಬೆಟ್ಟವನ್ನು ಏರಿ, ಗುಹೆಯಲ್ಲಿ ನೆಲೆಸಿರುವ ಸಿದ್ದೇಶ್ವರರ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಮಂಗಳಕರ ದಿನದಂದು ನಡೆಯುವ ವಿಶೇಷ ರುದ್ರಾಭಿಷೇಕ ಮತ್ತು ಬಿಲ್ವಾರ್ಚನೆಗಳು ಭಕ್ತರ ಕಣ್ಣುಗಳಿಗೆ ಹಬ್ಬದಂತಿರುತ್ತವೆ. ಶುದ್ಧ ವನ ಪರಿಸರದ ನಡುವೆ ಆಯೋಜಿಸಲಾಗುವ ಅನ್ನದಾನವು ಅತ್ಯಂತ ವಿಶಿಷ್ಟವಾಗಿದ್ದು, ಈ ಕ್ಷೇತ್ರದ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಆಧ್ಯಾತ್ಮಿಕ ಶಾಂತಿಯನ್ನು ಅರಸುವವರಿಗೆ ಈ ಜಾತ್ರಾ ಮಹೋತ್ಸವವು ಮರೆಯಲಾಗದ ಅನುಭವವಾಗುತ್ತದೆ. ಇದೇ ವೇಳೆ, ಈ ಗುಹೆಯಲ್ಲಿ ನೆಲೆಸಿರುವ ಶಿವಭಕ್ತ ಸಿದ್ದೇಶ್ವರರ ದರ್ಶನ ಪಡೆದು ಭಕ್ತರು ಇನ್ನಷ್ಟು ಪುನೀತರಾಗುತ್ತಾರೆ.

ಇಲ್ಲಿನ ಶಿವರಾತ್ರಿ ಜಾಗರಣೆ ನಿಜಕ್ಕೂ ವಿಶಿಷ್ಟವಾಗಿದೆ. ರಾತ್ರಿ ವೇಳೆಯಲ್ಲಿ ನಡೆಯುವ ಹರಿಕಥೆ, ಭಜನೆ, ಕೀರ್ತನೆ ಹಾಗೂ ಗಾಯನ ಕಾರ್ಯಕ್ರಮಗಳು ಭಕ್ತರನ್ನು ಭಕ್ತಿಯ ಪರವಶತೆಯಲ್ಲಿ ಮುಳುಗಿಸುತ್ತವೆ. ಬೆಟ್ಟದ ಮೇಲೆ ಸುತ್ತಲೂ ಅರಣ್ಯದ ಮಧ್ಯೆ ಶಿವನಾಮಸ್ಮರಣೆ ಮೊಳಗುತ್ತಿದ್ದರೆ, ಇಡೀ ಗುಹಾ ಪರಿಸರವು ಸಾಕ್ಷಾತ್ ಕೈಲಾಸವೇ ಧರೆಗಿಳಿದಂತೆ ಭಾಸವಾಗುತ್ತದೆ. ಈ ದಿವ್ಯ ಜಾಗರಣೆ ಮತ್ತು ಸಾಂಸ್ಕೃತಿಕ ವೈಭವದ ಸಂಗಮವನ್ನು ಕಣ್ಣಾರೆ ಸವಿಯಲು ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಲೇಬೇಕು ಎಂಬ ಭಾವನೆ ಮೂಡುತ್ತದೆ. ಇನ್ನು ಯುಗಾದಿ, ಗಣೇಶ ಚತುರ್ಥಿ, ಶಿವರಾತ್ರಿ, ಸಂಕ್ರಾಂತಿ, ದೀಪಾವಳಿ ಹಾಗೂ ರಾಮನವಮಿ ಹಬ್ಬಗಳ ಸಂದರ್ಭದಲ್ಲಿಯೂ ಇಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ನಿಮ್ಮ ದೇಣಿಗೆ ಭಕ್ತಿ ಮತ್ತು ಸೇವೆಗೆ ಶಕ್ತಿ ನೀಡುತ್ತದೆ

ಈ ಕರ್ಮ ಯೋಗ ಮತ್ತು ಭಕ್ತಿ ಯೋಗ ಮುಖಾಂತರ ನಡೆಯುವ ಸೇವಾ ಪ್ರಯತ್ನದಲ್ಲಿ ಎಲ್ಲರೂ ಭಾಗಿಯಾಗಿ, ಒಂದು ಸಣ್ಣ ಕಾಣಿಕೆ ದೊಡ್ಡ ಬದಲಾವಣೆ ತರಬಹುದು — ಸಮಾಜದ ಒಳಿತಿಗಾಗಿ ನಿಮ್ಮ ಸಹಕಾರವೇ ನಮ್ಮ ಶಕ್ತಿ.